ಯಾಕೋಬೀ, ಫ್ರೆಡ್ರಿಕ್ ಹೆನ್ರಿಕ್
1743-1819. ಹೆಸರಾಂತ ಜರ್ಮನ್ ತತ್ತ್ವಜ್ಞಾನಿ ಮತ್ತು ಲೇಖಕ. ಡಸೆಲ್‍ಡಾರ್ಫ್‍ನಲ್ಲಿ ಜನಿಸಿದ ಈತ ಜಿನೀವ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ. ತಂದೆಯ ಇಷ್ಟದಂತೆ ವ್ಯಾಪಾರ ವೃತ್ತಿಯನ್ನು ಕೈಗೊಂಡು ಫ್ರಾಂಕ್‍ಫರ್ಟಿನಲ್ಲಿ ಸಹಾಯಕನಾಗಿ ದುಡಿಯುತ್ತಿದ್ದರೂ ಇವನ ಒಲವು ಧಾರ್ಮಿಕ ವಿಷಯಗಳ ಬಗೆಗಿತ್ತು. ವ್ಯಾಪಾರವೃತ್ತಿ ಒಗ್ಗದೆ ವೃತ್ತಿಬಾಂಧವರಿಂದ ಅಪಹಾಸ್ಯಕ್ಕೀಡಾಗಿ ಜಿನೀವಕ್ಕೆ ಹೋದ. ಅಲ್ಲಿ ಶ್ರೇಷ್ಠ ವಿದ್ವಾಂಸರ ಸಂಗ ಮತ್ತು ಫ್ರೆಂಚ್ ಸಾಹಿತ್ಯಾಭ್ಯಾಸದ ಅವಕಾಶ ಸಿಕ್ಕಿತು. ಇಷ್ಟಾದರೂ ತನ್ನ ಆಕಾಂಕ್ಷೆಗಳನ್ನು ಮೂಲೆಗೊತ್ತಿ 1764ರಲ್ಲಿ ತನ್ನ ಹುಟ್ಟೂರಿನಲ್ಲಿ ವ್ಯಾಪಾರ ಕ್ಷೇತ್ರ ಪ್ರವೇಶಿಸಿದ. ಆದರೆ ಅಲ್ಪಾವಧಿಯಲ್ಲಿ ಅವನಿಗೆ ಸರ್ಕಾರಿ ಉದ್ಯೋಗಕ್ಕೆ ಕರೆ ಬಂದು ವ್ಯಾಪಾರಿ ವೃತ್ತಿಯನ್ನು ಕೈಬಿಡಬೇಕಾಯಿತು. 1770ರಲ್ಲಿ ಜ್ಯುಲಿಯರ್ಸ್ ಮತ್ತು ಬರ್ಗ್ ಪಟ್ಟಣ ಪ್ರದೇಶಗಳ ಆಡಳಿತ ಸಮಿತಿಯ ಸದಸ್ಯನಾದ. ತನ್ನ ವಿದ್ಯಾಭ್ಯಾಸ ದೆಶೆಯಿಂದಲೂ ಸಾಹಿತ್ಯ ಮತ್ತು ತತ್ತ್ವಶಾಸ್ತ್ರಗಳ ಬಗ್ಗೆ ಆಸಕ್ತಿ ಹೊಂದಿದ್ದ ಯಾಕೋಬೀಗೆ ಈಗ ಅತ್ತ ಗಮನ ಹರಿಸಲು ಸಾಧ್ಯವಾಯಿತು. ವೀಲ್ಯಾಂಡ್ ಎಂಬವನೊಂದಿಗೆ ಸೇರಿ ಒಂದು ನಿಯತಕಾಲಿಕ ಪತ್ರಿಕೆಯನ್ನು ಪ್ರಾರಂಭಿಸಿ ಅದರಲ್ಲಿ ತನ್ನ ಲೇಖನಗಳನ್ನು ಪ್ರಚುರ ಪಡಿಸಿದ. ಮ್ಯೂನಿಕ್ ನಗರಕ್ಕೆ 1779ರಲ್ಲಿ ಹೋಗಿ ಸ್ವಲ್ಪಕಾಲ ನೆಲೆಸಿದ್ದ. ಮತ್ತೆ 1793ರಲ್ಲಿ ಹುಟ್ಟೂರಾದ ಡಸ್ಸೆಲ್ ಡಾರ್ಫ್‍ನ್ನು ಬಿಟ್ಟು ಹಾಲ್‍ಸ್ಟೀನ್‍ನಲ್ಲಿ ನೆಲೆಸಿದ. ಆ ನಗರದಲ್ಲಿ ಪ್ರಿವಿ ಕೌನ್ಸಿಲ್ ಆಗಿದ್ದಾಗ ಬವೆರಿಯನ್ ಸುಂಕ ಪದ್ಧತಿಯಲ್ಲಿದ್ದ ನ್ಯೂನತೆಗಳನ್ನು ಹೊರಗೆಡಹಿ ಜನಪ್ರಿಯತೆಯನ್ನು ಕಳೆದುಕೊಂಡ. ಅದೇ ಸಮಯದಲ್ಲಿ ಇವನ ಹಲವಾರು ಲೇಖನಗಳು ಪ್ರಕಟವಾದವು. ಅನಂತರ ಇವನು ಪೆಂಪಲ್‍ಫೋರ್ಟ್‍ನಲ್ಲಿ ಸ್ವತಃ ನಿರ್ಮಿಸಿಕೊಂಡಿದ್ದ ಸುಂದರ ಭವನದಲ್ಲಿ ವಾಸಿಸುತ್ತಿದ್ದ. ಪತ್ನಿ ವಿಯೋಗದಿಂದ ದುಃಖಕ್ಕೊಳಗಾದರೂ ಆ ಸಮಯದಲ್ಲಿ ಖ್ಯಾತ ವಿದ್ವಾಂಸ ಗಯಟೆಯೊಡನೆ ಮತ್ತೆ ಸಂಪರ್ಕ ಬೆಳೆಸಿಕೊಂಡುದಲ್ಲದೆ ಹರ್ಡರ್‍ನೊಡನೆ ಮೈತ್ರಿ ಸಾಧಿಸಿದ. ಇವೆಲ್ಲದರ ಫಲವಾಗಿ ಮತೀಯ ವಿಷಯಗಳಿಗೆ ಸಂಬಂಧಿಸಿದಂತೆ ತಾತ್ವಿಕ ವಿಚಾರಗಳತ್ತ ತನ್ನನ್ನು ತೊಡಗಿಸಿಕೊಂಡನಲ್ಲದೆ ಸ್ಪಿನೋಜನ ತತ್ವ್ತವಿಚಾರಗಳಿಗೆ ಸಂಬಂಧಿಸಿದಂತೆ (1785) ಪತ್ರ ಸರಣಿಯನ್ನು ಸಹ ಬರೆದು ಪ್ರಕಟಿಸಿದ. ಫ್ರಾನ್ಸಿನ ಮಹಾಕ್ರಾಂತಿಯ ಪ್ರಭಾವ ಹರಡುತ್ತಿದ್ದಂತೆ ಪ್ಯಾಂಡಬೆಕ್ ಮತ್ತು ಹ್ಯಾಂಬರ್ಗ್‍ಗಳಲ್ಲಿ ಕೆಲಕಾಲ ವಾಸಮಾಡಿ ಅನಂತರ ಯೂಟಿಸ್ ನಗರ ತಲುಪಿದ. 1801ರಲ್ಲಿ ಪ್ಯಾರಿಸ್ ನಗರಕ್ಕೆ ಭೇಟಿಕೊಟ್ಟು ಯೂಟಿಸ್‍ಗೆ ಹಿಂದಿರುಗಿ ಆಜೀವ ಪರ್ಯಂತ ಅಲ್ಲಿ ವಾಸಿಸುವ ಇಚ್ಛೆ ಹೊಂದಿದ್ದ. ಮ್ಯೂನಿಕ್ ನಗರದಲ್ಲಿ 1804ರಲ್ಲಿ ವಿಜ್ಞಾನ ಅಕೆಡೆಮಿ ಸ್ಥಾಪನೆಯಾದಾಗ ತನ್ನ ಭಾವಮೈದುನನ ದುರದೃಷ್ಟದಿಂದ ತನ್ನ ಸಂಪತ್ತಿನ ಬಹುಪಾಲನ್ನು ಕಳೆದುಕೊಂಡ; ಅಕಾಡೆಮಿಯಿಂದ ಬಂದ ಆಹ್ವಾನವನ್ನು ಸ್ವೀಕರಿಸಬೇಕಾಗಿ ಕೆಲಕಾಲಾನಂತರ ಬವೆರಿಯನ್ ಅಕೆಡೆಮಿಯ ಅಧ್ಯಕ್ಷ ಪದವಿ ದೊರೆಯಿತು. ತನ್ನ ಎಪ್ಪತ್ತನೆಯ ವಯಸ್ಸಿನವರೆಗೂ ಅದರ ಅಧ್ಯಕ್ಷನಾಗಿದ್ದು ಅನಂತರ ನಿವೃತ್ತಿ ಹೊಂದಿದರೂ ಈತನ ವೇತನವನ್ನು ಮುಂದುವರಿಸಲಾಯಿತು. ಜರ್ಮನಿಯ ಪ್ಲೇಟೊ ಎಂಬ ಗೌರವಕ್ಕೆ ಪಾತ್ರನಾಗಿದ್ದ ಯಾಕೋಬೀ 1819 ಮಾರ್ಚ್ 10ರಂದು ಮರಣಹೊಂದಿದ. ಇವನ ತಾತ್ತ್ವಿಕ ವಿಚಾರಗಳ ಬಗ್ಗೆ ಸರ್ವಮಾನ್ಯತೆ ದೊರಕದಿದ್ದರೂ ಇವನೊಡನೆ ಸಂಪರ್ಕವಿರಿಸಿಕೊಂಡಿದ್ದವರೆಲ್ಲರೂ ಇವನೊಬ್ಬ ಉದಾತ್ತ ವ್ಯಕ್ತಿಯೆಂದು ಒಮ್ಮತದಿಂದ ಒಪ್ಪಿದ್ದಾರೆ. ಕೊನೆಗಾಲದಲ್ಲಿ ತನ್ನ ಸಮಗ್ರ ಕೃತಿಗಳ ಸಂಗ್ರಹ ಮತ್ತು ಪ್ರಕಟಣಕಾರ್ಯ ಕೈಗೊಂಡಿದ್ದರೂ ಅದು ಕೈಗೂಡುವ ಮುನ್ನ ನಿಧನ ಹೊಂದಿದ.

	ಇವನು ತನ್ನ ಕಾಲದವರೆಗೆ ಅಸ್ತಿತ್ವದಲ್ಲಿದ್ದ ತತ್ತ್ವಶಾಸ್ತ್ರಪದ್ಧತಿಗಳ ಬಗ್ಗೆ ವೈರುದ್ಧ್ಯ ಭಾವನೆಗಳನ್ನು ಬೆಳೆಸಿಕೊಂಡಿದ್ದ: ಅವು ಜನರನ್ನು ಮತಾಂಧರನ್ನಾಗಿಸುತ್ತವೆಂಬುದು ಇವನ ನಂಬಿಕೆ. ಇವನು ಮ್ಯಾಂಡೆಲ್ಸನ್, ಕಾಂಟ್, ಫಿಟ್ಷ್ ಹಾಗೂ ಷೆಲ್ಲಿಂಗ್‍ರಂಥ ತತ್ತ್ವಜ್ಞಾನಿಗಳ ವಾದಗಳನ್ನು ಒಪ್ಪುತ್ತಿರಲಿಲ್ಲ. ಇವನ ಸಿದ್ಧಾಂತ, ನಂಬಿಕೆ ಮತ್ತು ಭಾವನೆಗಳ ಮೇಲೆ ಆಧಾರಿತವಾಗಿತ್ತು. ಯತಾರ್ಥಜ್ಞಾನ (ಕಾಗ್ನಿಷನ್) ಇವನ ಅತ್ಯುತ್ತಮ ಬರೆಹಗಳಲ್ಲೊಂದು. ವೊಲ್ಡೆಮಾರ್ ಎಂಬುದು ಇವನ ತತ್ತ್ವಜ್ಞಾನ ಸಂಬಂಧವಾದ ಕಾದಂಬರಿ. ಇವನ ಮುಖ್ಯ ಕೃತಿಗಳಲ್ಲಿ ಆಲ್‍ವಿಲ್ಸ್ ಬ್ರೀಫ್-ಸಮ್ಮೆಲುಂಗ್ (1774), ಬ್ರೀಫ್‍ಉಬರ್ ಡಿ ಲೆಹ್ರೆ ಸ್ಟಿನೋಜಸ್ (1785). ಡೇವಿಡ್ ಹ್ಯೂಮ್ ಟೈಬರ್ ಡೆನ್ ಗ್ಲೌಬಿನ್ ಅಥವಾ ಐಡಿಯಲಿಸ್ಮಸ್ ಅಂಡ್ ರಿಯಲಿಸ್ಮಸ್ (1787). ಸೆಂಡ್ ಷ್ರೀಬೆನ್ ಅನ್ ಫಿಷ್ಟ್ (1799) ಮತ್ತು ವಾನ್ ಡೆನ್ ಗಾಟ್ಲಿಚೆನ್ ಡಿನ್ ಗನ್ ಉಂಡ್ ಇಹ್ರರ್ ಓಫ್ಟೆಸ್‍ಬರುಂಗ್ (1811) ಮುಖ್ಯವಾದವು. ಇವನ ಕೃತಿಗಳನ್ನು ಆರು ಸಂಪುಟಗಳಲ್ಲಿ ಫ್ಲೀಷರ್ ಪ್ರಕಟಿಸಿದ. ಫಾದರ್ ರಾತ್ ಇವನ ಪತ್ರಗಳನ್ನು ಎರಡು ಸಂಪುಟಗಳಲ್ಲಿ (1825 ಮತ್ತು 1827) ಪ್ರಕಟಿಸಿದ್ದಾನೆ. ಸ್ಲೆeóÉಲ್ ವೊಲ್ಡೆಯಾರ್ ಗ್ರಂಥದ ವಿಮರ್ಶೆಯನ್ನು ಪ್ರಕಟಿಸಿರುವುದು ಯಾಕೋಬೀಯ ಅಭ್ಯಾಸಿಗಳಿಗೆ ಬಹಳ ಉಪಯುಕ್ತವಾಗಿದೆ. ಯಾಕೋಬೀಯ ಮಗ ಕಾರ್ಲ್ ವಿಗಂಡ್ ಮ್ಯಾಕ್ಸಿ ಮಿಲಿಯನ್ (1775-1858) ಪ್ರಸಿದ್ಧ ಸೈಕಿಯಾಟ್ರಿಸ್ಟ್ ಆಗಿದ್ದ.										

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ